Home > ABOUT > ನಮ್ಮ ಬಗ್ಗೆ

ಅತ್ಯಾಚಾರಗಳ, ಲೈಂಗಿಕ ದೌರ್ಜನ್ಯಗಳ ಹಾಗೂ ಲೈಂಗಿಕ ಆಸಕ್ತಿಯನ್ನು ಬಿಂಬಿಸುವ ಅಸಹಜ ನಡವಳಿಕೆಗಳ ಹಿಂದಿನ ಕಾರಣಗಳ ಬಗ್ಗೆ ಅರಿವು ಮೂಡಿಸುವ ಹಾಗೂ ಮುಖ್ಯವಾಗಿ  ಇಂಥ ಘಟನೆಗಳು ಆಗದಿರುವಂತೆ ತಡೆಯುವ ಬಗ್ಗೆ, ಸಮಾಜದಲ್ಲಿನ ಎಲ್ಲಾ ವರ್ಗಗಳ ಜನರ ಮನಗಳಲ್ಲಿ, ಜಾಗೃತಿ ಮೂಡಿಸುವುದು ಜನದನಿಯ ಪ್ರಥಮ ಧ್ಯೇಯವಾಗಿದೆ .

2012ರ ಡಿಸೆಂಬರ್‍‍ 16ರಂದು ದೆಹಲಿಯಲ್ಲಿ ನಿರ್ಭಯ ಅತ್ಯಾಚಾರ ಪ್ರಕರಣ ಘಟಿಸಿದಾಗ, ಅತ್ಯಾಚಾರದ ವಿರುದ್ಧ ದನಿ ಎತ್ತಿದ್ದ, ಕನ್ನಡ ರಂಗಭೂಮಿ ಮತ್ತು ಕಿರುತೆರೆಯ ಅಭಿನೇತ್ರಿ, ಬರಹಗಾರ್ತಿ ಶ್ರೀಮತಿ ಜಯಲಕ್ಷ್ಮೀ ಪಾಟೀಲ್,  ಮುಂದೆ ಅಂತರ್ಜಾಲ ಸಾಮಾಜಿಕ ತಾಣವಾದ ‘ಫೇಸ್‍ಬುಕ್‍’ನ ಸ್ನೇಹಿತರಲ್ಲಿ ಮನವಿ ಮಾಡಿಕೊಂಡು, ತನ್ನ ಮನವಿಗೆ ಸ್ಪಂದಿಸಿದ ಕೆಲವು ಸಹೃದಯಿ ಸ್ನೇಹಿತರೊಂದಿಗೆ ‘ಜನದನಿ’ಯನ್ನು ಹುಟ್ಟುಹಾಕಿದರು.

2014ರ ಆಗಸ್ಟ್ 02ರಂದು ವಿಧ್ಯುಕ್ತವಾಗಿ ತನ್ನ ಕೆಲಸವನ್ನಾರಂಭಿಸಿದ ಜನದನಿ, ಈಗ ಆರು ಟ್ರಸ್ಟಿಗಳನ್ನೊಳಗೊಂಡ ನೊಂದಾಯಿತ ಟ್ರಸ್ಟ್ (TRUST) ಆಗಿದೆ.

ಪ್ಲೇ ಹೋಂ, ನರ್ಸರಿ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪೋಷಕರು, ಪ್ರೌಢಶಾಲೆ  ಹಾಗೂ ಮಹಾವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳು, ಅನಾಥಾಲಯಗಳಲ್ಲಿನ ಮಕ್ಕಳು, ಯಾವುದೇ ಸಂಘ ಸಂಸ್ಥೆಗಳು, ಸರಕಾರಿ ಮತ್ತು ಖಾಸಗಿ ಕಾರ್ಯಾಲಯಗಳು,  ಒಟ್ಟಿನಲ್ಲಿ ಭೂಮಿಯ ಮೇಲಿನ ಪ್ರತಿಯೊಂದು ಮನೆಯ ಜನರ ಮನಗಳಲ್ಲೂ ಈ ಕುರಿತು ಜಾಗೃತಿ ಮೂಡಿಸುವುದನ್ನು ಗುರಿಯಾಗಿಟ್ಟುಕೊಂಡು ಕಾರ್ಯಪ್ರವೃತ್ತವಾಗಿರುವ ಜನದನಿ, ಈಗಾಗಲೇ ಅನೇಕ ಕಡೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ತನ್ನ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಬಂದಿದೆ.

ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲು ಇಚ್ಛಿಸುವವರು, ನಿಗದಿತ ದಿನಾಂಕದ ಹದಿನೈದು ದಿನಗಳ ಮೊದಲು ಜನದನಿಗೆ ತಿಳಿಸಬೇಕು ಹಾಗೂ ಕಾರ್ಯಕ್ರಮಕ್ಕಾಗಿ ಮೂರು ಗಂಟೆಗಳ ಕಾಲಾವಕಾಶವನ್ನು ಕಾದಿರಿಸಬೇಕು.

ಸಮಾಜದ ಸ್ವಾಸ್ಥ್ಯಕ್ಕಾಗಿ ವ್ಯವಸ್ಥೆ ಬದಲಾಗಲಿ, ಮನೆಯ ಒಳಗೂ ಹೊರಗೂ” ಎನ್ನುವುದು ಜನದನಿಯ ಧ್ಯೇಯ ವಾಕ್ಯ.