Home > PROGRAM > ಆನ್ಲೈನ್ ಚಿತ್ರಕಲೆ ಮತ್ತು ಪ್ರಬಂಧಗಳ ಸ್ಪರ್ಧೆಗಳ ತೀರ್ಪುಗಾರರ ಟಿಪ್ಪಣಿಗಳು

ಜನದನಿಯು ಪ್ರೌಢಶಾಲಾ ಮಕ್ಕಳಿಗಾಗಿ ರಾಜ್ಯ ಮಟ್ಟದ ಚಿತ್ರಕಲೆ ಮತ್ತು ಪ್ರಬಂಧಗಳ ಆನ್ಲೈನ್ ಸ್ಪರ್ಧೆಗಳನ್ನು ದಿನಾಂಕ ೧೭ ಡೆಸೆಂಬರ್ ೨೦೨೨ರಂದು ನಡೆಸಿತ್ತು.  

ಖ್ಯಾತ ವ್ಯಂಗ್ಯಚಿತ್ರ ಕಲಾವಿದರಾದ ಶ್ರೀ. ರಘುಪತಿ ಶೃಂಗೇರಿ ಅವರು ಚಿತ್ರಕಲೆಗೂ, ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜನದನಿಯ ಸದಸ್ಯರಾದ ಶ್ರೀಮತಿ. ರೂಪ ಸತೀಶ್, ಜಯಶ್ರೀ ಮಾಚಿಗಣಿ ಮತ್ತು ವಿದ್ಯಾಶಂಕರ್ ಹರಪನಹಳ್ಳಿ ಅವರುಗಳು ಪ್ರಂಬಧಗಳ ತೀರ್ಪುಗಾರರಾಗಿ ಯೋಗ್ಯವಾದವುಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಿದ್ದಾರೆ. ಎರಡೂ ಸ್ಪರ್ಧೆಗಳ ತೀರ್ಪುಗಾರರಿಗೂ ಜನದನಿ ಟ್ರಸ್ಟ್ ಕೃತಜ್ಞತಾಪೂರ್ವಕವಾಗಿ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತದೆ.

ತೀರ್ಪುಗಾರರ ಟಿಪ್ಪಣಿಗಳು

ಚಿತ್ರಕಲೆ

ತೀರ್ಪುಗಾರರು: ಶ್ರೀ. ರಘುಪತಿ ಶೃಂಗೇರಿ

2022ರ ಸಾಲಿನ ರಾಜ್ಯ ಮಟ್ಟದ ಪ್ರೌಢಶಾಲಾ ಚಿತ್ರಕಲಾ ಸ್ಪರ್ಧೆ ನಡೆಸಿದ ಬೆಂಗಳೂರಿನ ಜನದನಿ ಟ್ರಸ್ಟ್ ನವರು ಈ ಬಾರಿ ಮಕ್ಕಳಿಗೆ ಸ್ಪರ್ಧೆಗೆ ಕೊಟ್ಟ ವಿಷಯ; ‘ಲೈಂಗಿಕ ಶೋಷಣೆಗಳಿಂದ ಪಾರಾಗಲು ನಿಮ್ಮ ಉಪಾಯಗಳು ಏನು? ನಿಮ್ಮ ಪ್ರಕಾರ ಪರಿಹಾರಗಳು ಏನು?’ ಎಂಬುದಾಗಿತ್ತು.
ಜನದನಿ ಟ್ರಸ್ಟ್ ನವರ ಈ ನಡೆ ನಿಜಕ್ಕೂ ಅನುಕರಣೀಯ. ಈ ಸ್ಪರ್ಧೆಯ ಮೂಲಕ ಮಕ್ಕಳಲ್ಲಿ ಲೈಂಗಿಕ ಶೋಷಣೆಯ ಬಗ್ಗೆ ಜಾಗೃತಿ ಮೂಡಿಸಲು ಇದರಿಂದ ಸಾಧ್ಯ. 
ಭಾಗವಹಿಸಿದ ಎಲ್ಲಾ ಮಕ್ಕಳು ತುಂಬಾ ಚೆನ್ನಾಗಿ ಚಿತ್ರಗಳನ್ನು ರಚಿಸಿದ್ದಾರೆ.
ಈ ಚಿತ್ರಕಲೆಯ ಸ್ಪರ್ಧೆಗೆ ಬಂದಿರುವ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲವು ಮಾನದಂಡಗಳನ್ನು ಪರಿಗಣಿಸಿ ಈ  ಕೆಳಕಂಡ ನನ್ನ ತೀರ್ಪನ್ನು ತಿಳಿಸಿದ್ದೇನೆ.


1. ಚಿತ್ರಕಲಾ ಸ್ಪರ್ಧೆಗೆ ಕೊಟ್ಟಿರುವ ವಿಷಯಕ್ಕೆ ಮಕ್ಕಳು ಎಷ್ಟು ಸೂಕ್ತವಾದ ರೀತಿಯಲ್ಲಿ ಚಿತ್ರವನ್ನು ಬರೆದಿದ್ದಾರೆ ಎಂಬುದು.
2. ಕೊಟ್ಟಿರುವ ವಿಷಯವನ್ನು ಪೇಪರ್ ನಲ್ಲಿ ಹೇಗೆ ಚಿತ್ರದ ಮೂಲಕ ಪ್ರೆಸೆಂಟ್ ಮಾಡಿದ್ದಾರೆ ಎಂಬುದು. (ಲೇಔಟ್/ಪ್ರೆಸೆಂಟೇಷನ್)
3. ಚಿತ್ರಗಳಲ್ಲಿ ವರ್ಣಗಳ ಬಳಕೆ.
4. ಲೈಂಗಿಕ ಶೋಷಣೆಗಳಿಂದ ಪಾರಾಗಲು ನಿಮ್ಮ ಉಪಾಯಗಳು ಏನು? ನಿಮ್ಮ ಪ್ರಕಾರ ಪರಿಹಾರಗಳು ಏನು?  ಈ ವಿಷಯಕ್ಕೆ ಸಂಬಂದಿಸಿದಂತೆ ಮಕ್ಕಳು ಚಿತ್ರ ಬರೆಯಬೇಕಾಗಿದ್ದರಿಂದ ಉಪಾಯಗಳು ಹಾಗೂ ಪರಿಹಾರಗಳು ಎರಡನ್ನೂ ಸೂಕ್ತ ರೀತಿಯಲ್ಲಿ ಚಿತ್ರದಲ್ಲಿ ತೋರಿಸಿರುವ ಮಕ್ಕಳ ಚಿತ್ರಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
ಈ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಹಾಗೂ ವಿಜೇತರಾದ ಎಲ್ಲಾ ಮಕ್ಕಳಿಗೂ ಅಭಿನಂದನೆಗಳು.

 ಶ್ರೀ. ರಘುಪತಿ ಶೃಂಗೇರಿ

ಬಹುಮಾನ ವಿಜೇತ ಚಿತ್ರಗಳು




ಪ್ರಬಂಧ

ತೀರ್ಪುಗಾರರು:ರೂಪ ಸತೀಶ್


ತೀರ್ಪುಗಾರರು: ಜಯಶ್ರೀ ಮಾಚಿಗಣಿ
  ತೀರ್ಪುಗಾರರು: ವಿದ್ಯಾಶಂಕರ್ ಹರಪನಹಳ್ಳಿ

                            

ಪ್ರಬಂಧ ರಚನೆಗೆ,
‘ಲೈಂಗಿಕ ಶೋಷಣೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಾಜದ ಜವಾಬ್ದಾರಿಗಳೇನು? ಮತ್ತು ಸರ್ಕಾರಕ್ಕೆ ನೀವು ನೀಡುವ ಸಲಹೆ ಸೂಚನೆಗಳು ಏನು?’
ಎನ್ನುವ ವಿಷಯದ ಮೇಲೆ ಪ್ರೌಢಶಾಲಾ ಮಕ್ಕಳಿಗಾಗಿ ಜನದನಿ ದಿನಾಂಕ ೧೭ ಡಿಸೆಂಬರ್ ೨೦೨೨ರಂದು ರಾಜ್ಯ ಮಟ್ಟದ ಆನ್ಲೈನ್ ಸ್ಪರ್ಧೆಯನ್ನು ಏರ್ಪಡಿಸಿತ್ತು.
ಸ್ಪರ್ಧೆಗೆ ಬಂದ ೧೮೦ಕ್ಕೂ ಹೆಚ್ಚು ಪ್ರಬಂಧಗಳ ಓದಿದ ನಮಗೆಲ್ಲಾ ಆದ ಅಚ್ಚರಿಯೆಂದರೆ, ವಿದ್ಯಾರ್ಥಿಗಳು ತೋರಿದ ಪ್ರೌಢಿಮೆ ಮತ್ತು ವಿಷಯ ತಿಳುವಳಿಕೆ. ಇತ್ತೀಚಿಗೆ ನಡೆದ ಲೈಂಗಿಕ ಶೋಷಣೆಯ ಘಟನೆಗಳು ಮತ್ತು ಮಾಧ್ಯಮದಲ್ಲಿ ಅವು ಪಡೆದ ಪ್ರಾಮುಖ್ಯತೆ, ವಿದ್ಯಾರ್ಥಿಗಳ ಮೇಲೂ ಸಾಕಷ್ಟು ಪ್ರಭಾವ ಬೀರಿರುವುದು ಕಂಡುಬಂದಿದೆ.

ನಮಗೆ ಸ್ಪರ್ಧೆಯಲ್ಲಿ ಕಂಡಂತ ಸಕಾರತ್ಮಕ ಅಂಶಗಳು

೧. ವಿದ್ಯಾರ್ಥಿಗಳಿಂದ ವಿಷಯ ಸಂಗ್ರಹಣೆ : ಎಲ್ಲಾ ವಿದ್ಯಾರ್ಥಿಗಳು ಬಹಳಷ್ಟು ಶ್ರಮವಹಿಸಿ ವಿವಿಧ ಮೂಲಗಳಿಂದ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಕುರಿತು ಸಾಕಷ್ಟು ಮಾಹಿತಿಯನ್ನು, ಕಾಯಿದೆಗಳನ್ನು  ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣಗಳ ಮಾಹಿತಿಯನ್ನು ಸಮರ್ಪಕವಾಗಿ ಕಲೆಹಾಕಿದ್ದಾರೆ. 
೨. ಮಾಹಿತಿಯನ್ನು ಸಂಗ್ರಹಿಸಿಕೊಂಡು ಪ್ರಬಂಧದ ರೂಪದಲ್ಲಿ ಪ್ರಸ್ತುತ ಪಡಿಸಿದ ರೀತಿ ಶ್ಲಾಘನೀಯ. 
೩. ಸುಮಾರು ೩೦% ವಿದ್ಯಾರ್ಥಿಗಳು ಲೈಂಗಿಕ ದೌರ್ಜನ್ಯ ಬರೀ ಹೆಣ್ಣು ಮಕ್ಕಳಿಗಷ್ಟೇ ಅಲ್ಲ ಮಕ್ಕಳು, ಗಂಡಸರು ಕೂಡ ಬಲಿಪಶುವಾಗಿದ್ದಾರೆ ಎನ್ನುವುದನ್ನು ಸರಿಯಾಗಿ ಗ್ರಹಿಸಿದ್ದಾರೆ.

೪. ವಿದ್ಯಾರ್ಥಿಗಳು ಸರಕಾರಕ್ಕೆ ಮತ್ತು ಸಮಾಜಕ್ಕೆ ನೀಡಿದ ಸಲಹೆ, ಸೂಚನೆಗಳು ಗಮನಿಸಿದಾಗ, ಅವರ ಸೀಮಿತ ಚೌಕಟ್ಟು ಮೀರಿ ಆಲೋಚಿಸಿರುವುದು ಕಂಡುಬರುತ್ತದೆ: 
ಕಾನೂನು ಮಾಡುವುದಷ್ಟೇ ಅಲ್ಲ, ಅದನ್ನೂ ಜಾರಿಗೆ ತರುವ ಮತ್ತು ಯಾವುದೇ ಒತ್ತಡಕ್ಕೆ ಮಣಿಯದೆ ಪಾಲಿಸುವುದು ಎನ್ನುವುದು ವಿದ್ಯಾರ್ಥಿಗಳ ಮುಖ್ಯ ಸಲಹೆ. 

1.ಶಾಲೆ ಮತ್ತು ಕಾಲೇಜುಗಳಲ್ಲಿ ನೈತಿಕ ಮತ್ತು ಮೌಲ್ಯಗಳ ಶಿಕ್ಷಣದ ಅವಶ್ಯಕತೆ ಬಗ್ಗೆ ಒತ್ತಿ ಹೇಳಿದ್ದಾರೆ.

2. ವಿದ್ಯಾರ್ಥಿಗಳಿಗೆ ಸ್ವಯಂ ರಕ್ಷಣೆ ತರಬೇತಿ (ಕರಾಟೆ ಇತ್ಯಾದಿ) ನಿರಂತರವಾಗಿ ನೀಡುತ್ತಿರಬೇಕೆನ್ನುವುದು ಬಹುತೇಕರ ಮತ್ತೊಂದು ಸಲಹೆ.

3. ಲೈಂಗಿಕ ದೌರ್ಜನ್ಯ ತಡೆಗಟ್ಟಲು ಬೇಕಾಗಿರುವ ಸಲಹೆ ಸೂಚನೆಗಳನ್ನು ಪಠ್ಯದ ಭಾಗವಾಗಿಸಬೇಕೆನ್ನುವುದು ಕೆಲವು ವಿದ್ಯಾರ್ಥಿಗಳ ಸಲಹೆ.

4. ಲೈಂಗಿಕ ದೌರ್ಜನ್ಯ ತಡೆಗಟ್ಟುವಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯ ಬಗ್ಗೆ ಕೂಡ ಚಿಂತಿಸಿ, ಎಂದು ಸಲಹೆ ನೀಡಿದ್ದಾರೆ.

5. ಲಿಂಗಬೇಧ ಮಾಡದೆ ಸಮಾನತೆ ಪಾಲನೆ, ಸರ್ವರಿಗೂ ಶಿಕ್ಷಣ, ಸಮಾನ ಅವಕಾಶ ಮತ್ತೊಂದು ಬಹು ಮುಖ್ಯ ಸಲಹೆ.

ಇನ್ನೂ ಕೆಲವು ಪ್ರಬಂಧಗಳಲ್ಲಿ, ನಮ್ಮ ಸಮಾಜದ ಪ್ರತಿಬಿಂಬವೇನೂ ಎಂಬಂತೆ ಬಂದಿರುವ ನಕಾರಾತ್ಮಕ ಅಂಶಗಳನ್ನೂ ನಾವು ಗಮನಿಸಬೇಕಾಗಿದೆ.
ಶಿಕ್ಷಣ, ಸಂವಾದದ ಮೂಲಕ ವಿದ್ಯಾರ್ಥಿಗಳಲ್ಲಿ ಸರಿಯಾದ ಅರಿವು ಮೂಡಿಸಬೇಕಾಗಿದೆ. ಅವುಗಳಲ್ಲಿ ಬಹು ಮುಖ್ಯವಾದವು :

1.ಧರಿಸುವ ಉಡುಪು ಅತ್ಯಾಚಾರಕ್ಕೆ ಪ್ರಮುಖ ಕಾರಣ ಎಂದು ತಪ್ಪಾಗಿ ನಂಬಿರುವುದು.

2.ಮಹಿಳೆಯರ ಅತಿ ವೈಭವೀಕರಣ : ಅದರಿಂದ ಉಂಟಾಗುವ ತಪ್ಪು ಗ್ರಹಿಕೆ ಮತ್ತು ಅನಪೇಕ್ಷಿತ ನಿರೀಕ್ಷೆಗಳನ್ನು ಹೊಂದಿರುವುದು.

3.ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಬಲಿಯಾದ ಹೆಣ್ಣು ಮಕ್ಕಳನ್ನೇ  ಮತ್ತು ಪೋಷಕರನ್ನೇ ದೂರುವುದು ಮತ್ತು ನೈತಿಕ ಹೊಣೆಯಾಗಿಸುವುದು.

ಇದೆನೆಲ್ಲಾ ಮೀರಿ ಪ್ರಬಂಧಗಳ ಓದಿದ್ದು ನಮೆಗೆಲ್ಲಾ ನಮ್ಮ ರಾಜ್ಯದ ವಿದ್ಯಾರ್ಥಿಗಳ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ಹೊಸ ಭರವಸೆಯಂತು  ಮೂಡಿದೆ. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಮತ್ತು ಅವರನ್ನು ಸ್ಪರ್ಧೆಗೆ ತಯಾರು ಮಾಡಿದ ಶಿಕ್ಷಕರಿಗೂ ಮತ್ತು ಪೋಷಕರಿಗೂ ಅಭಿನಂಧನೆಗಳು.
 

ರೂಪ ಸತೀಶ್, ಜಯಶ್ರೀ ಮಾಚಿಗಣಿ,  ವಿದ್ಯಾಶಂಕರ್ ಹರಪನಹಳ್ಳಿ